ಇಸ್ಮಾಯ್ಲಿಯ
ಈಜಿಪ್ಟಿನಲ್ಲಿ ಸೂಯೆಜ್ ಕಾಲುವೆಯ ದಡದ ಮೇಲಿರುವ ಒಂದು ಪಟ್ಟಣ. ಮೆಡಿಟರೇನಿಯನ್ ಸಮುದ್ರ ತೀರದಿಂದ ಮತ್ತು ಕೆಂಪುಸಮುದ್ರದಿಂದ 50 ಮೈ. ಮತ್ತು ಕೈರೋನಗರದಿಂದ ಈಶಾನ್ಯಕ್ಕೆ 93 ಮೈ. ದೂರದಲ್ಲಿದೆ. ಜನಸಂಖ್ಯೆ ಸುಮಾರು ಒಂದು ಲಕ್ಷ. ಪೂರ್ಟ್ ಸೈದ್ ಮತ್ತು ಸೂಯೆಜ್ ನಗರಗಳಿಗೆ ಸಿಹಿ ನೀರಿನ್ನೊಯ್ಯುವ ಕಾಲುವೆ ಇದರ ಪಕ್ಕದಲ್ಲೇ ಹರಿಯುತ್ತದೆ; ಕೈರೋನಗರದಿಂದ ಆ ಎರಡು ನಗರಗಳಿಗೆ ಹೋಗುವ ರೈಲ್ವೆ ಮಾರ್ಗದಲ್ಲಿದೆ. ಸೂಯೆಜ್ ಕಾಲುವೆಯ ನಿರ್ಮಾಣಕ್ಕೆ ಅನುಕೂಲವಾಗಲೆಂದು ಈ ನಗರವನ್ನು 1863ರಲ್ಲಿ ಕಟ್ಟಿದರು; ಖೇಡಿವ್ (ತುರ್ಕಿ ಸರಕರದ ರಾಜಪ್ರತಿನಿಧಿ) ಇಸ್ಮಾಯಿಲ್‍ನ ಹೆಸರನ್ನಿಟ್ಟರು. ಇದು ಆಧುನಿಕ ನಗರನಿರ್ಮಾಣಕ್ಕನುಸಾರವಾಗಿ ಕಟ್ಟಿರುವ ಊರು. ಸರಳ ಚೌಕಟ್ಟಿನ ನಕ್ಷೆಗನುಸಾರವಾಗಿ ನಿರ್ಮಿತವಾಗಿ ಅನೇಕ ಚೌಕಗಳನ್ನೂ ಸಾಲು ಮರಗಳನ್ನು ಉದ್ಯಾನಗಳನ್ನೂ ಉನ್ನತ ಸೌಧಗಳನ್ನೂ ಹೊಂದಿರುವ ಸುಂದರ ನಗರ. ಸೂಯೆಜ್ ಕಾಲುವೆಯಲ್ಲಿ ಹಡಗು ಚಲನೆಯನ್ನು ನಿಯಂತ್ರಿಸುವ ಭಾರಿ ಕಚೇರಿಯೂ ಕೆಲಸಗಾರರ ವಸತಿಗೃಹಗಳೂ ಸಮಾಜ ಕಲ್ಯಾಣಕ್ಕೆ ಬೇಕಾದ ಇತರ ಅನುಕೂಲತೆಗಳೂ ಇವೆ. ಆಧುನಿಕ ವೈದ್ಯವಿe್ಞÁನಕ್ಕನುಸಾರವಾಗಿ ಮಲೇರಿಯ ನಿರ್ಮೂಲವನ್ನು ಮೊತ್ತಮೊದಲು ನಡೆಸಿದ್ದು ಇಲ್ಲಿ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ